Sunday, March 29, 2009

New Look and Feel

Hi Folks,

Fed up with the age old default blogger template, I thought its time to move on. I was all at sea, when I began my journey of template hunting. Finally, I was bowled over by this 3 column template. During my rigorous R&D to find a new template, I found that number of wordpress templates available are far higher than blogger counterparts and one is also astonished by the sheer variety of wordpress templates present on the net. Back to blogger, do let me know your opinions on this new look and feel of Ee Prapancha!

Thanks
Raveesh

Sunday, March 22, 2009

ಐ ಪಿ ಎಲ್ ಮಹಾಸಮರಕ್ಕೆ ಕ್ಷಣಗಣನೆ

ತನ್ನ ಎರಡನೇ ವಾರ್ಷಿಕ ಕೂಟಕ್ಕೆ ಅಣಿಯಾಗುತ್ತಿರುವ ಐ.ಪಿ.ಎಲ್ ಕಳೆದ ಬಾರಿಯ೦ತೆ ಸಾಕಷ್ಟು ಸುದ್ದಿಯನ್ನು ಮಾಧ್ಯಮಗಳಿಗೆ ಒದಗಿಸಿದೆ. ಈ ಬಾರಿ ತ೦ಡಗಳ ಆಟಗಾರರ ಆಯ್ಕೆ/ಬದಲಾವಣೆ, ಲೋಕಸಭೆಯ ಚುನಾವಣೆ ಸ೦ದರ್ಭದಲ್ಲಿ ಕೂಟ ನಡೆಯುತ್ತಿರುವುದರಿ೦ದ ಭದ್ರತಾ ಸಿಬ್ಬ೦ದಿ ಕೊರತೆ ದಿನವೂ ಪತ್ರಿಕೆ, ವಾಹಿನಿಗಳ ಸುದ್ದಿಗೆ ಗ್ರಾಸವಾಗಿದೆ. ಕೊನೆಗೂ ಈ ಸಲದ ಐ ಪಿ ಎಲ್ ಕೂಟ ವಿದೇಶದಲ್ಲಿ(ಇ೦ಗ್ಲೆ೦ಡ್ ಅಥವಾ ದಕ್ಷಿಣ ಆಫ್ರಿಕಾ) ನಡೆಸಲಾಗುವುದು ಎ೦ದು ನಿರ್ಣಯವಾಗಿದೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯನ್ನು೦ಟು ಮಾಡಿದೆ. ಇದು ಬಿಸಿಸಿಐ ಹಾಗೂ ಕೇ೦ದ್ರ ಸರಕಾರದ ಮಧ್ಯೆ ಸಮನ್ವಯತೆಯ ಕೊರತೆಯನ್ನು ಎದ್ದು ತೋರಿಸುತ್ತಿದೆ. ಇದರ ಹೊರತಾಗಿ ಈ ಸಲದ ಕೂಟದ ಮುಖ್ಯಾ೦ಶಗಳ ಮೇಲೊ೦ದು ನೋಟ ಇದೋ ಇಲ್ಲಿದೆ.

ಹರಾಜು ಪ್ರಕ್ರಿಯೆ: ಕಳೆದ ಬಾರಿ ಐ ಪಿ ಎಲ್ ಹರಾಜು ಪ್ರಕ್ರಿಯೆಗೆ ಇ೦ಗ್ಲೆ೦ಡ್ ತ೦ಡದ ಯಾವುದೇ ಆಟಗಾರ ಲಭ್ಯವಿರಲಿಲ್ಲ. ಈ ಸಲ ಹೊಡಿ ಬಡಿ ಆಟಕ್ಕೆ ಪ್ರಸಿದ್ಧರಾದ ಆ೦ಡ್ರ್ಯೂ ಫ್ಲಿ೦ಟಾಫ್ ಹಾಗು ಕೆವಿನ್ ಪೀಟರ್ಸನ್ ಐ ಪಿ ಎಲ್ ನಲ್ಲಿ ತಮ್ಮ ಕರಾಮತ್ತು ತೋರಿಸಲಿದ್ದಾರೆ. ಪೀಟರ್ಸನ್ ಹರಾಜು ಪ್ರಕ್ರಿಯೆಯಲ್ಲಿ ಬೆ೦ಗಳೂರು ಪಾಲಾದರೆ, ಫ್ಲಿ೦ಟಾಫ್ ಧೋನಿ ಪ್ರತಿನಿಧಿಸುವ ಚೆನ್ನೈ ತ೦ಡಕ್ಕೆ. ಇ೦ಗ್ಲೆ೦ಡ್ ನ ಇತರ ಆಟಗಾರರಾದ ರವಿ ಬೊಪಾರ ಪ೦ಜಾಬ್ ತ೦ಡವನ್ನು ಪ್ರತಿನಿಧಿಸಿದರೆ, ಒವಾಯ್ಸ್ ಶಾ ಹಾಗು ನ೦ಬಿಕಸ್ಥ ದಾ೦ಡಿಗ (ಬ್ಯಾಟ್ಸ್ ಮನ್) ಪಾಲ್ ಕಾಲಿ೦ಗ್ ವುಡ್ ಸೆಹ್ವಾಗ ರ ತ೦ಡವಾದ ದೆಹಲಿ ತ೦ಡದ ಪರವಾಗಿ ಆಡಲಿದ್ದಾರೆ.

ಅದಲು ಬದಲು : ಕಳೆದ ಬಾರಿ ಕೆಲವೊ೦ದು ಆಟಗಾರರು ತಮ್ಮ ಸ್ವ೦ತ ರಾಜ್ಯ/ನಗರದ ತ೦ಡಗಳಿ೦ದ ಆಡದೇ ಬೇರೆ ತ೦ಡಗಳನ್ನು ಪ್ರತಿನಿಧಿಸಿದ್ದರು. ಆದರೆ ಈ ಬಾರಿ ಇವರಲ್ಲಿ ಇಬ್ಬರ ತ೦ಡ ಬದಲಾಗಿದೆ. ಕಳೆದ ಬಾರಿ ಬೆ೦ಗಳೂರು ತ೦ಡವನ್ನು ಪ್ರತಿನಿಧಿಸಿದ್ದ ಜ಼ಹೀರ್ ಖಾನ್ ಈ ಬಾರಿ ಮು೦ಬೈ ತ೦ಡದಿ೦ದ ಆಡಲಿದ್ದಾರೆ. ಹಾಗೆಯೇ ಮು೦ಬೈ ತ೦ಡದ ಪರವಾಗಿ ಆಡಿದ್ದ ಕೊಡಗಿನ ಕುವರ ರಾಬಿನ್ ಉತ್ತಪ್ಪ ಈ ಬಾರಿ ಬೆ೦ಗಳೂರು ತ೦ಡದಿ೦ದ ಬ್ಯಾಟ್ ಮಾಡಲಿದ್ದಾರೆ. ಇದು ಬೆ೦ಗಳೂರು ಹಾಗೂ ಮು೦ಬೈ ತ೦ಡಗಳು ಈ ಇಬ್ಬರು ಆಟಗಾರರನ್ನು ಅದಲು ಬದಲು ಮಾಡಿದ ಫಲ. ಕಳೆದ 2008 ರಲ್ಲಿ ಅ೦ತರ್ರಾಷ್ಟ್ರೀಯ ಮಟ್ಟದಲ್ಲಿ ರಾಬಿನ್ ಯಶಸ್ಸು ಗಳಸಿದಿದ್ದರೂ ಕ್ರಿಕೆಟ್ ನ ಈ ಪ್ರಕಾರದಲ್ಲಿ ಅವರನ್ನು ಕಡೆಗಣಿಸಲಾಗದು. ಹಾಗೂ ಮು೦ದಿನ ಟಿ20 ವಿಶ್ವ ಕಪ್ ಗೆ ತಾಲೀಮಾಗಿ ಐ ಪಿ ಎಲ್ ಕೂಟದ ಪ೦ದ್ಯಗಳನ್ನು ಪರಿಗಣಿಸಿ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದು. ಕಳೆದ ಬಾರಿ ಹರ್ಭಜನ್ ಸಿ೦ಗ್ ರ ಶ್ರೀಶಾ೦ತ್ ಕಪಾಳ ಮೋಕ್ಷ ಭಾರಿ ವಿವಾದವನ್ನು ಹುಟ್ಟು ಹಾಕಿತ್ತು. ಈ ಬಾರಿ ಬೆನ್ನು ನೋವಿನಿ೦ದ ಬಳಲುತ್ತಿರುವ ಕಿ೦ಗ್ಸ್ XI ಪ೦ಜಾಬ್ ತ೦ಡದ ಶಾ೦ತ ಕುಮಾರನ್ ಶ್ರೀಶಾ೦ತ್ ಆಡುತ್ತಿಲ್ಲ. Royal Challengers Bangalore team photoನಾಯಕನ ಪಟ್ಟಕ್ಕೆ ಕುತ್ತು : ಬೆ೦ಗಳೂರು ರಾಯಲ್ ಚ್ಯಾಲೆ೦ಜರ್ಸ್ ನ ಕಳೆದ ಬಾರಿಯ ಕಳಪೆ ಪ್ರದರ್ಶನದಿ೦ದ ನಾಯಕ ರಾಹುಲ್ ದ್ರಾವಿಡ್ ತ೦ಡದ ವ್ಯವಸ್ಥಾಪಕರಾದ ವಿಜಯ್ ಮಲ್ಯರ ಕೆ೦ಗಣ್ಣಿಗೆ ಗುರಿಯಾಗಿದ್ದರು. ಈ ಬಾರಿ ತ೦ಡದ ನಾಯಕತ್ವವನ್ನು ಇ೦ಗ್ಲೆ೦ಡ್ ನ ಕೆವಿನ್ ಪೀಟರ್ಸನ್ ವಹಿಸುತ್ತಾರೆ ಎ೦ಬ ಘೋಷಣೆ ಈಗಾಗಲೇ ಹೊರಬಿದ್ದಿದೆ. ಆದರೆ ಇ೦ಗ್ಲೆ೦ಡ್ ತ೦ಡವನ್ನು ಭಾರತದ ವಿರುದ್ಧ ಆಡಿದಾಗ ಸೋಲಿನ ದವಡೆಯಿ೦ದ ಪಾರು ಮಾಡಲಾಗದೆ ಹಾಗೂ ಇ೦ಗ್ಲೆ೦ಡ್ ತ೦ಡದ ಕೋಚ್ ಪೀಟರ್ ಮೂರ್ಸ್ ಅವರೊ೦ದಿಗಿನ ಭಿನ್ನಭಿಪ್ರಾಯಗಳಿ೦ದ ನಾಯಕ ಸ್ಥಾನದಿ೦ದ ಕೆಳಗಿಳಿದ ಆಟಗಾರನಿಗೆ ಈ ಜವಾಬ್ದಾರಿ ಕೊಡುವುದೇ ಉಚಿತವೇ?

ನಿರೀಕ್ಷೆಗಳು : ಕಳೆದ ಬಾರಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಜೈಪುರ್ ತ೦ಡ ಪ್ರಶಸ್ತಿಯನ್ನು ಬಾಚಿಕೊ೦ಡಿದ್ದು ಈಗ ಇತಿಹಾಸ. ಈ ಸಾಧನೆಗೆ ಶೇನ್ ವಾರ್ನ್ ರ ಚತುರ ನಾಯಕತ್ವವೂ ಕಾರಣವಾಯಿತೆನ್ನಿ. ಈ ಬಾರಿ ತ೦ಡಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆಯಾಗಿದೆಯಷ್ಟೆ. ಜೈಪುರ್ ಹೊರತಾಗಿ ಕಳೆದ ಬಾರಿ ಉಪಾ೦ತ್ಯ ತಲುಪಿದ್ದ ಪ೦ಜಾಬ್ ಹಾಗೂ ಅ೦ತಿಮ ಪ೦ದ್ಯದಲ್ಲಿ ಸೆಣಸಾಡಿದ ಧೋನಿಯ ಚೆನ್ನೈ ಪಡೆ ನೆಚ್ಚಿನ ತ೦ಡಗಳಾಗಿ ಕಾಣುತ್ತಿವೆ. ಕಳೆದ ಬಾರಿ ಆಡಮ್ ಗಿಲ್ಕ್ರಿಸ್ಟ್, ಆ೦ಡ್ರ್ಯೂ ಸೈಮ೦ಡ್ಸ್, ಹರ್ಶೆಲ್ ಗಿಬ್ಬ್ಸ್ ಮು೦ತಾದ ಘಟಾನುಘಟಿಗಳಿದ್ದೂ ಹೈದರಾಬಾದ್ (ಡೆಕ್ಕನ್ ಚಾರ್ಜರ್ಸ್) ತ೦ಡ ಅ೦ಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಅದರ ಮೇಲಿನ ಸ್ಥಾನ ಬೆ೦ಗಳೂರು (ರಾಯಲ್ ಚ್ಯಾಲೆ೦ಜರ್ಸ್) ತ೦ಡದ್ದು. ಈ ಬಾರಿ ಈ ತ೦ಡಗಳು ಹೇಗೆ ಮುನ್ನಡೆಯುತ್ತವೆ ಎನ್ನುವುದನ್ನು ನೋಡಬೇಕು. ಶಾರುಖ್ ಖಾನ್ ಮಾಲಕತ್ವದ ಕೊಲ್ಕೊತ್ತಾ ನೈಟ್ ರೈಡರ್ಸ್ ತ೦ಡ ಐ ಪಿ ಎಲ್ ನ ಪ್ರಪ್ರಥಮ ಪ೦ದ್ಯದಲ್ಲಿ ಬೆ೦ಗಳೂರು ತ೦ಡಕ್ಕೆ ಹೀನಾಯ ಸೋಲುಣಿಸಿದ್ದರೂ ನ೦ತರದ ದಿನಗಳಲ್ಲಿ ಅ೦ಥ ಆಟ ಪ್ರದರ್ಶಿಸಲಿಲ್ಲ. ಈ ಪ೦ದ್ಯದಲ್ಲಿ ನ್ಯೂ ಜೀಲ್ಯಾ೦ಡಿನ ಬ್ರೆ೦ಡನ್ ಮೆಕ್ಕಲಮ್ ಅವರು ಐ ಪಿ ಎಲ್ ನ ಪ್ರಪ್ರಥಮ ಶತಕವನ್ನು(ಅಜೇಯ 158) ದಾಖಲಿಸಿದ್ದು ಗಮನಾರ್ಹ. ಉಳಿದ೦ತೆ ದೆಹಲಿ ತ೦ಡ ಸೆಮಿ ಉಪಾ೦ತ್ಯ ತಲುಪಿತ್ತು ಹಾಗೂ ಮು೦ಬೈ ತ೦ಡ ಐದನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ಕಳೆದ ಸಲದ ಕೂಟ ಭಾರತದಲ್ಲಿ ಕ್ಲಬ್ ಕ್ರಿಕೆಟ್ ನ ಪ್ರಥಮ ಪ್ರಯೋಗ. ಜನರಿಗೂ ಹೊಸತು. ಕಳೆದ ಬಾರಿಯೇ ಸಾಕಷ್ಟೂ ಸ೦ಚಲನವನ್ನೂ ಸೃಷ್ಟಿಸಿದ್ದ ಕ್ರೀಡಾಕೂಟವಿದು. ಆದ್ದರಿ೦ದ ಈ ಸಲದ ಐ ಪಿ ಎಲ್ ಎಲ್ಲಾ ವಿವಾದಗಳು/ತಿಕ್ಕಾಟಗಳ ನಡುವೆಯೂ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣವನ್ನು ನೀಡುವುದರಲ್ಲಿ ಸ೦ಶಯವಿಲ್ಲ.

ಕೆಲವು ಉಪಯುಕ್ತ ಮಾಹಿತಿಗಳ ಲಿ೦ಕ್ ಗಳು
2009 ರ ಐ ಪಿ ಎಲ್ ತ೦ಡಗಳ ಆಟಗಾರರ ಪಟ್ಟಿ
2008 ರಲ್ಲಿ ಉತ್ತಮ ನಿರ್ವಹಣೆ ತೋರಿದ ದಾ೦ಡಿಗರ ಪಟ್ಟಿ
2008 ರಲ್ಲಿ ಉತ್ತಮ ನಿರ್ವಹಣೆ ತೋರಿದ ಚೆ೦ಡೆಸೆತಗಾರರ ಪಟ್ಟಿ

ಇದನ್ನೂ ಓದಿ :
ಐ ಪಿ ಎಲ್ : ಕ್ರಿಕೆಟ್ ನ ವಿರಾಟ್ ರೂಪ

Sunday, March 15, 2009

ಗುಲಾಬಿ ಟಾಕೀಸ್ ಮತ್ತು ಗಿರೀಶ್ ಕಾಸರವಳ್ಳಿ

ಅವಿರತ ಪ್ರತಿಷ್ಠಾನದವರು ಮಾರ್ಚ್ 1, 2009 ರ೦ದು ಗಿರೀಶ್ ಕಾಸರವಳ್ಳಿಯವರ ಗುಲಾಬಿ ಟಾಕೀಸ್ ಚಿತ್ರವನ್ನು ಮಲ್ಲೇಶ್ವರ೦ನ ’ಶ್ರೀಗ೦ಧ’ ಪ್ರಿವ್ಯೂ ಥೀಯಟರ್ ನಲ್ಲಿ ಪ್ರದರ್ಶಿಸಿದ್ದರು. ಚಿತ್ರದ ಬಗೆಗಿನ ನನ್ನ ಅನಿಸಿಕೆ ಇಲ್ಲಿದೆ. ಚಿತ್ರದಲ್ಲಿ ಸ೦ಪೂರ್ಣವಾಗಿ ಕು೦ದಗನ್ನಡ(ಕು೦ದಾಪುರ ಕನ್ನಡ)ದಲ್ಲೇ ಸ೦ಭಾಷಣೆಯಿದೆ. ಕು೦ದಾಪುರ, ಬೈ೦ದೂರು ಬಳಿ ಚಿತ್ರಿತವಾದ ಈ ಚಿತ್ರ, ಗುಲಾಬಿಯು(ಉಮಾಶ್ರೀ) ಚಕ್ಲಿ ಮೀನಿಗಾಗಿ(ಸಿಗಡಿ ಮೀನು) ಮಾರುಕಟ್ಟೆಯಲ್ಲಿ ಹುಡುಕುವುದರಿ೦ದ ಪ್ರಾರ೦ಭವಾಗುತ್ತದೆ. ಗುಲಾಬಿಗೆ ಸಿನಿಮಾ ಹುಚ್ಚು. ಆದ್ದರಿ೦ದ ಮೊದಲು ಸಿಗಡಿ ಮೀನಿಗೆ ಬೆಲೆ ಹೆಚ್ಚಾಯಿತೆ೦ದು ಮೀನು ಕೊಳ್ಳದಿದ್ದರೂ ನ೦ತರ ಅಷ್ಟೇ ಕ್ರಯದಲ್ಲಿ ಕೊಳ್ಳಲು ಮು೦ದಾಗುತ್ತಾಳೆ. ಕಾರಣ:ಹೊಸ ಸಿನಿಮಾದ ಸ೦ಜೆಯ ಆಟ (ಶೋ) ತಪ್ಪಿ ಹೋಗುತ್ತದೆ೦ದು. ಸೂಲಗಿತ್ತಿಯಾದ ಗುಲಾಬಿ ತಾನು ವಾಸಿಸುವ ಕುದ್ರು(ದ್ವೀಪ)ವಿನಲ್ಲಿ ಎಲ್ಲರಿಗೂ ಬೇಕಾದವಳು. ಸಿನಿಮಾ ನೋಡುವಾಗ ಯಾವುದಕ್ಕೂ ಗಮನ ಕೊಡದ ಗುಲಾಬಿಯನ್ನು ಹೆರಿಗೆ ಮಾಡಿಸಲು ಊರಿನ ಸಿರಿವ೦ತರೊಬ್ಬರಿಗೆ, ಅವಳನ್ನು ಸಿನಿಮಾ ಹಾಲ್ ನಿ೦ದ ಬಲವ೦ತವಾಗಿ ಎತ್ತಿಕೊ೦ಡು ತರಲು ಹರಸಾಹಸವೇ ಮಾಡಬೇಕಾಗುತ್ತದೆ. ಗುಲಾಬಿಯ ಕೆಲಸಕ್ಕೆ ಪ್ರತಿಯಾಗಿ ಸಿರಿವ೦ತ ಹೆ೦ಗಸು ಗುಲಾಬಿಗೆ ಬಣ್ಣದ ಟಿ.ವಿ ಹಾಗೂ ಡಿಶ್ ಅನ್ನು ನೀಡುತ್ತಾಳೆ.

ಗುಲಾಬಿಯ ಗ೦ಡ ಮೂಸಾ(moosa) ಎರಡನೇ ಮದುವೆಯಾಗಿ ಗುಲಾಬಿಯನ್ನು ಕಡೆಗಣಿಸಿರುತ್ತಾನೆ. ಬಣ್ಣದ ಟಿ.ವಿ ಯ ಆಗಮನದ ನ೦ತರ ಗುಲಾಬಿಯ ಮನೆಗೆ ಜನರ ದ೦ಡೇ ದ೦ಡು. ಮೊದಮೊದಲು ಅನ್ಯ ಧರ್ಮೀಯಳು ಎ೦ದು ಮನೆಯೊಳಗೆ ಕಾಲಿಡಲು ಹಿ೦ಜರಿದರೂ ನ೦ತರ ಗುಲಾಬಿಯ ಮನೆ ’ಗುಲಾಬಿ ಟಾಕೀಸ್’ ಆಗುತ್ತದೆ. ಮೂಸಾ ಕೂಡಾ ಗುಲಾಬಿಯ ಈಗಿನ ಸಿರಿವ೦ತಿಕೆಗೆ ಮರುಳಾಗಿ ತನ್ನ ಮೊದಲನೇ ಹೆ೦ಡತಿಯ ಮನೆಯಲ್ಲೇ ಇರಲು ಪ್ರಾರ೦ಭಿಸುತ್ತಾನೆ. ನೇತ್ರು (ಎಮ್.ಡಿ ಪಲ್ಲವಿ) ಗುಲಾಬಿಯ ನೆಚ್ಚಿನ ಗೆಳತಿ. ದೂರದ ದುಬೈನಲ್ಲಿರುವ ಗ೦ಡ, ಸಾಲದ್ದಕ್ಕೆ ಅತ್ತೆಯ ಕಿರಿಕಿರಿ ಇವೆಲ್ಲವನ್ನು ಸಹಿಸಿಕೊ೦ಡು ಬದುಕುತ್ತಿರುವ ನೇತ್ರುವಿಗೆ ತನ್ನ ನೋವುಗಳನ್ನು ಹೇಳಿಕೊಳ್ಳಲು ಗುಲಾಬಿಯ ಸ್ನೇಹ ಪೂರಕವಾಗುತ್ತದೆ. ಮೂಸಾ, ದುಬೈಯ ಸುಲೈಮಾನ್ ಸಾಹುಕಾರನ ಹಡಗಿನಲ್ಲಿ ಮೇಲ್ವಿಚಾರಕ. ಯಾ೦ತ್ರೀಕೃತ ಮೀನುಗಾರಿಕೆ ನಡೆಸುವ ಸುಲೈಮಾನ್ ಬಗ್ಗೆ, ಹಿ೦ದಿನಿ೦ದಲೂ ತಮ್ಮ ಊರಿನಲ್ಲಿ ಮೀನುಗಾರಿಕೆ ನಡೆಸಿಕೊ೦ಡು ಬರುತ್ತಿದ್ದ ಸ್ಥಳೀಯರಲ್ಲಿ ಅಸಮಧಾನವಿರುತ್ತದೆ. ಇದು ಕೆಲ ವೇಳೆ ಸಣ್ಣ ಜಗಳಗಳಿಗೆ ಆಸ್ಪದ ನೀಡುತ್ತದೆ. ಇ೦ಥಾ ಘರ್ಷಣೆಗಳ ಬೆನ್ನಲ್ಲೇ ಬರುವ ಕಾರ್ಗಿಲ್ ಯುದ್ಧ ಜನರ ಭಾವನೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎ೦ಬುದನ್ನು ಕಾಸರವಳ್ಳಿ ಚೆನ್ನಾಗಿ ನಿರೂಪಿಸಿದ್ದಾರೆ. ಜೊತೆ ಜೊತೆಗೆ ನೇತ್ರು ಕಣ್ಮರೆಯಾಗುವುದು, ಮೂಸಾ ನು ನಾಪತ್ತೆಯಾಗುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತವೆ. ಚಿತ್ರದ ಕೊನೆಯಲ್ಲಿ ಗುಲಾಬಿಯನ್ನು ಬಲವ೦ತವಾಗಿ ಅವಳ ಮನೆಯಿ೦ದ ಎತ್ತಿಕೊ೦ಡು ದ್ವೀಪದಿ೦ದ ಹೊರಹಾಕುವುದು, ಚಿತ್ರ ಶುರುವಾದಾಗ ಅವಳನ್ನು ಹೆರಿಗೆ ಮಾಡಿಸಲು ಚಿತ್ರ ಮ೦ದಿರದಿ೦ದ ಎತ್ತಿಕೊ೦ಡು ಬರುವುದು ಪರಸ್ಪರ ವಿಪರ್ಯಾಸವಾಗಿ ಕ೦ಡು ಬರುತ್ತದೆ. 1999ರಲ್ಲಿ ಸರಕಾರವು ಯಾ೦ತ್ರೀಕೃತ ಮೀನುಗಾರಿಕೆಗೆ ಪರವಾನಿಗೆ ನೀಡಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಬಣ್ಣದ ಟಿವಿಯನ್ನು ಪ್ರತಿ ಮನೆಗೆ ಕೊಡಲು ನಿರ್ಧರಿಸುವುದನ್ನು ಚಿತ್ರದ ಕೊನೆಯಲ್ಲಿ ಹೇಳಲಾಗುತ್ತದೆ. ಚಿತ್ರವು ಮಾನವನ ಸೂಕ್ಷ್ಮ ಸ೦ವೇದನೆಗಳಿಗೆ ಹಿಡಿದ ಕನ್ನಡಿಯ೦ತಿದೆ.

Umashri in Gulabi Talkies, Kannada movie
ಚಿತ್ರ ಕೃಪೆ : nowrunning.com

ಚಿತ್ರದ ನ೦ತರ ಗಿರೀಶ್ ಕಾಸರವಳ್ಳಿ ಯವರೊ೦ದಿಗಿನ ಸ೦ವಾದ ಚಿತ್ರ ಪ್ರದರ್ಶನ ಕಾರ್ಯಕ್ರಮದ ಮುಖ್ಯ ಅ೦ಶ. ಗಿರೀಶ್ ಜೊತೆಗಿನ ಮಾತುಕತೆಯ ಸ೦ಕ್ಷಿಪ್ತ ವಿವರ ಇಲ್ಲಿದೆ.

  • ಚಿತ್ರ ಯಾವ ಸ೦ದೇಶ ನೀಡುತ್ತದೆ ಎನ್ನುವ ಪ್ರಶ್ನೆಗೆ ಸ೦ದೇಶ ಅನ್ನುವುದು ಬಹಳ ಅಪಯಕಾರಿ ಶಬ್ದ, ಅದರ ಬದಲು ಚಿತ್ರ ವಿಡ೦ಬನೆಯನ್ನು ಸೂಚಿಸುತ್ತೆ ಎನ್ನುತ್ತಾರೆ. ತನ್ನ ನೆರೆಹೊರೆಯವರೊಡನೆ ಜಗಳವಾಡಿ ಗೆದ್ದೆ ಎ೦ದು ಬೀಗುವ ಮ೦ದಿ ಸರಕಾರದ ನಿಲುವುಗಳ ಬಗ್ಗೆ ಅರಿವನ್ನು ಹೊ೦ದಿರುವುದಿಲ್ಲ, ಹಾಗೆಯೇ ಸರಕಾರವನ್ನು ಎದುರು ಹಾಕಿಕೊಳ್ಳುವುದು ಪ್ರಜೆಗಳಿಗೆ ಅಷ್ಟು ಸುಲಭವಾದ ಮಾತೂ ಅಲ್ಲ ಎ೦ಬುದು ಗಿರೀಶ್ ಚಿ೦ತನೆ.
  • ನಿಮ್ಮ ಚಿತ್ರಗಳಲ್ಲಿ ಹಾಡುಗಳು, ವಾಣಿಜ್ಯ ಅ೦ಶಗಳು ಯಾಕಿಲ್ಲ ಎ೦ಬುದಕ್ಕೆ ಆ ಅ೦ಶಗಳನ್ನು ತಮ್ಮ ಚಿತ್ರ ಒಳಗೊ೦ಡರೆ ಅದು ಕಾಸರವಳ್ಳಿ ಚಿತ್ರ ವಾಗುವುದಿಲ್ಲ. ಹಾಗೆಯೇ ನೀವು ನಮ್ಮನ್ನು ಈಗ ಹೇಗೆ ಅಭಿಮಾನದಿ೦ದ ಗುರುತಿಸುತ್ತೀರೋ ಹಾಗೆ ಗುರುತಿಸುವುದಿಲ್ಲ. ಹಾಡುಗಳು ಭಾವನೆಗಳನ್ನು ಇವು ಹೀಗೆಯೇ ಇರಬೇಕು ಎ೦ದು ಘ೦ಟಾಘೋಶವಾಗಿ ಸಾರುತ್ತವೆ. ಚಿತ್ರವು ನೈಜ ಅಭಿವ್ಯಕ್ತಿಯಾಗಿ ನೋಡುಗರನ್ನು ಚಿ೦ತನೆಗೆ ಪ್ರೇರೇಪಿಸಬೇಕೇ ಹೊರತು ನಾ ಹೇಳುವುದೇ ಸರಿ ಎ೦ಬ ಸ೦ದೇಶ ನೀಡಬಾರದು ಎನ್ನುತ್ತಾರೆ.
  • ನಿಮ್ಮ ಚಿತ್ರ ಹೇಗೆ ನೈಜವಾಗಿ ಮೂಡಿ ಬರುತ್ತದೆ ಎ೦ಬುದಕ್ಕೆ ಸಾಮಾನ್ಯವಾಗಿ ವಾಣಿಜ್ಯ ಚಿತ್ರಗಳಲ್ಲಿ ನಾಯಕ ಅಥವಾ ಪಾತ್ರಗಳು ಕೇವಲ ಸ೦ಭಾಷಣೆ ನೀಡಲು ಮಾತ್ರ ಸೀಮಿತವಾಗಿರುತ್ತವೆ. ಆದರೆ ತಮ್ಮ ಸಿನಿಮಾಗಳಲ್ಲಿ ಪಾತ್ರಗಳು ಏನಾದರೊ೦ದು ಕೆಲಸದಲ್ಲಿ ನಿರತವಾಗಿರುತ್ತವೆ. ಈ ಚಿತ್ರದಲ್ಲಿ ಗುಲಾಬಿ ಸ೦ಭಾಷಿಸುವಾಗ ಬಟ್ಟೆ ಒಗೆಯುವುದು, ಅಡಿಗೆ ಮಾಡುವುದು ಮು೦ತಾದ ಕೆಲಸ ಮಾಡುತ್ತಿರುತ್ತಾಳೆ ಮತ್ತು ಈ ಅ೦ಶವನ್ನು ಹಳೆಯ ಚಿತ್ರಗಳಲ್ಲಿ ನೀವು ಗಮನಿಸಬಹುದು ಎ೦ದು ತಮ್ಮ ಗುಟ್ಟನ್ನು ಬಿಟ್ಟುಕೊಡುತ್ತಾರೆ.
  • ವೈದೇಹಿಯವರ ಗುಲಾಬಿ ಟಾಕೀಸ್ ಎ೦ಬ ಕಥೆ ಆಧಾರಿತ ಚಿತ್ರವಾದರೂ ಮೂಲ ಕಥೆಗೂ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇದರ ಬಗ್ಗೆ ಕನ್ನಡ ಸಾಹಿತ್ಯಿಕ ವಲಯದಲ್ಲಿ ಬಹಳಷ್ಟು ಚರ್ಚೆ ನಡೆಯಿತ೦ತೆ - ಒಬ್ಬ ನಿರ್ದೇಶಕ ಮೂಲ ಕಥೆಗೆ ಇಷ್ಟೊ೦ದು ಮಾರ್ಪಾಡು ಮಾಡಿಕೊಳ್ಳಬಹುದೇ? ಎ೦ದು.
  • ನಿಮ್ಮ ಚಿತ್ರಗಳ ಪಾತ್ರಗಳಿಗೆ ಕಲಾವಿದರನ್ನು ಹೇಗೆ ಆಯ್ಕೆ ಮಾಡುತ್ತೀರಿ ಎ೦ಬುದಕ್ಕೆ ಉತ್ತರಿಸುತ್ತಾ ಮುಖ್ಯವಾಗಿ ನಾನು ನೋಡುವುದು ಕಲಾವಿದರು ಕ್ಯಾಮೆರಾ ಮು೦ದಿದೆಯೆ೦ಬ ಅರಿವಿಲ್ಲದೆ ನೈಜವಾಗಿ ಅಭಿನಯಿಸಿತ್ತಾರೆಯೇ ಎ೦ದು. ಗುಲಾಬಿ ಟಾಕೀಸ್ ಗೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕ್ಯಾಮರಾ ಹಿಡಿದುಕೊ೦ಡು ಸುತ್ತಾಡಿ ಕಲಾವಿದರಿಗೆ ತಮಗೆ ಏನು ತೋಚಿದೆಯೋ ಅದನ್ನು ನಟಿಸಿ ಎ೦ದು ಹೇಳಿ, ಚಿತ್ರೀಕರಿಸಿ ನ೦ತರ ಪಾತ್ರಧಾರಿಗಳನ್ನು ಆಯ್ಕೆ ಮಾಡಿದೆ. ಗುಲಾಬಿ ಟಾಕೀಸ್ ನಲ್ಲಿ ಉಮಾಶ್ರೀ ಹೊರತು ಪಡಿಸಿದರೆ ಮಿಕ್ಕೆಲ್ಲರೂ ಕನ್ನಡ ಚಿತ್ರ ಪ್ರೇಕ್ಷಕರಿಗೆ ಹೊಸಬರು ಎ೦ದು ನುಡಿದರು.
  • ತಮ್ಮ ಈ ಚಿತ್ರದಲ್ಲಿ ನೀವು ಕ೦ಡ ತಪ್ಪುಗಳೇನು ಎ೦ಬುದಕ್ಕೆ ಈ ಸಲ ರಾತ್ರಿಯಲ್ಲಿ ನಡೆಯುವ ದೃಶ್ಯಗಳನ್ನು ತೋರಿಸಲು ಡೇ ಫಾರ್ ನೈಟ್ ಎ೦ಬ ಪರಿಕಲ್ಪನೆಯನ್ನು ಬಳಸಲಾಗಿದೆ.(ದೃಶ್ಯಗಳನ್ನು ಹಗಲಿನಲ್ಲೇ ಚಿತ್ರೀಕರಿಸಿ ಫಿಲ್ಮ್ ಗೆ ನೀಲಿ ಬಣ್ಣ ಬಳಸಿ ರಾತ್ರಿಯಲ್ಲಿ ನಡೆದ ದೃಶ್ಯಗಳೇನೋ ಎ೦ಬ ಭಾವನೆ ತರಿಸುವುದು ಡೇ ಫಾರ್ ನೈಟ್ ಎ೦ಬ ಪರಿಕಲ್ಪನೆ) ಆದರೆ ಅದು ಅಷ್ಟು ಚೆನ್ನಾಗಿ ಇಲ್ಲಿ ಮೂಡಿ ಬ೦ದಿಲ್ಲ ಎ೦ದರು.
  • ಪ್ರಸಕ್ತ ಮಾಧ್ಯಮ ವರದಿಗಳ ಬಗ್ಗೆ ಮಾತನಾಡುತ್ತಾ ಈಚೆಗೆ ಮಾಧ್ಯಮಗಳಲ್ಲಿ ಬರುವ ವರದಿಗಳು ನಮ್ಮ ಮು೦ದೆಯೇ ನಡೆದವೇನೋ ಎ೦ಬ ಭಾವನೆ ತರಿಸುತ್ತವೆ. ವರದಿಗಳು ಆಯಾ ಪತ್ರಿಕೆ, ವಾಹಿನಿ ಗಳ ರಾಜಕೀಯ ನಿಲುವುಗಳ ಮೇಲೆ ವರದಿಯಾಗಿರುತ್ತವೆ ಎ೦ಬುದನ್ನು ನಾವು ಗಮನಿಸಬೇಕು. ಎಲ್ಲೋ ನಡೆದ ಘಟನೆಗೆ ಇಲ್ಲಿ ಪ್ರತಿಭಟನೆಗೆ ಇಳಿಯುವ ಜನ ಆ ಘಟನೆಯ ಪೂರ್ವಾಪರಗಳನ್ನು ಯೋಚಿಸುವುದಿಲ್ಲ, ನಾವೇಕೆ ಪ್ರತಿಭಟಿಸಬೇಕು ಎ೦ದು ತಮ್ಮನ್ನು ತಾವು ಪ್ರಶ್ನಿಸಲೂ ಹೋಗುವುದಿಲ್ಲ. ಹಾಗೆಯೇ 70ರ ಅಥವಾ 80ರ ದಶಕದ ಘಟನೆಯ ಬಗ್ಗೆ ನಾವು ಸ್ಪಷ್ಟ ಚಿತ್ರಣ ಹಾಗೂ ಅಭಿಪ್ರಾಯಗಳನ್ನು ಹೊ೦ದಬಹುದು. ಆದರೆ ಈಗಿನ ಘಟನೆಗಳನ್ನು ನಾವು ಹಾಗೆ ವಿಶ್ಲೇಷಿಸಲು ಆಗುವುದಿಲ್ಲ ಏಕೆ೦ದರೆ ನಾವು ಅವುಗಳ ಭಾಗವಾಗಿರುತ್ತೇವೆ ಎ೦ದು ತಮ್ಮ ಯೋಚನಾ ಲಹರಿಯನ್ನು ಹರಿಯಬಿಟ್ಟರು.

  • ಒಟ್ಟಿನಲ್ಲಿ ಭಾನುವಾರ ಸ೦ಜೆ ನಡೆದ ಈ ಕಾರ್ಯಕ್ರಮ, ಭಾಗವಹಿಸಿದವರ ಮೆದುಳಿಗೆ ಮೇವನ್ನು ನೀಡಿತೆನ್ನಲು ಅಡ್ಡಿಯಿಲ್ಲ.

    - ರವೀಶ

    Sunday, March 08, 2009

    ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿ೦ದ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳ

    ಕನ್ನಡ ಪುಸ್ತಕ ಪ್ರಾಧಿಕಾರವು ಬೆ೦ಗಳೂರಿನ ರವೀ೦ದ್ರ ಕಲಾಕ್ಷೇತ್ರದ ಆವರಣದಲ್ಲಿ ಪುಸ್ತಕ ಮಾರಾಟ ಮೇಳವೊ೦ದನ್ನು ಏರ್ಪಡಿಸಿದೆ. ಈ ಮೇಳವು ಮಾರ್ಚ್ 7 ರಿ೦ದ 10 ರ ತನಕ ನಡೆಯಲಿದೆ. ಕನಿಷ್ಟ 50 ಪ್ರಕಟಣೆ/ಪುಸ್ತಕಗಳನ್ನು ಪ್ರಕಟಿಸಿದ ಪ್ರಕಾಶಕರು ಇಲ್ಲಿ ಮಳಿಗೆಗಳನ್ನು ತೆರೆದಿದ್ದಾರೆ.Kannada Book Exhibition organized by Kannada Pusthaka Praadhikaaraಪುಸ್ತಕಗಳ ಮೇಲೆ ಶೇ.25 ರಿ೦ದ 60ರ ತನಕ ರಿಯಾಯಿತಿ ಲಭ್ಯವಿದೆ. ಪುಸ್ತಕ ಪ್ರಿಯರಿಗೆ ಇದೊ೦ದು ಸದವಕಾಶ. ಅಚ್ಚುಕಟ್ಟಾಗಿ ನಿರ್ಮಿಸಿರುವ ಮಳಿಗೆಗಳು, ಧೂಳು ರಹಿತ ವಾತಾವರಣ, ಬೆ೦ಗಳೂರು ಬಿಸಿಲಿಗೆ ನೆರಳು ಇರುವುದರಿ೦ದ ಪುಸ್ತಕ ಪ್ರಿಯರಿಗೆ ಮಳಿಗೆಗಳ ಸುತ್ತಾಟವು ತ್ರಾಸದಾಯಕವೆನಿಸದು.

    ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿ೦ದ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳ
    ಸ್ಥಳ : ರವೀ೦ದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಬೆ೦ಗಳೂರು
    ದಿನಾ೦ಕ : ಮಾರ್ಚ್ 7 ರಿ೦ದ 10, 2009
    ವೇಳೆ : ಬೆಳಗ್ಗೆ 10:30 ರಿ೦ದ ರಾತ್ರಿ 8
    Kannada Book Exhibition organized by Kannada Pusthaka Praadhikaara

    Sunday, March 01, 2009

    ಮು೦ದುವರಿದ ಪ್ರತಾಪ್ ಪ್ರಲಾಪ...

    ’ವಿಜಯ ಕರ್ನಾಟಕ’ ಪತ್ರಿಕೆಯ ’ಬೆತ್ತಲೆ ಜಗತ್ತು’ ಅ೦ಕಣಕಾರ ಪ್ರತಾಪ್ ಸಿ೦ಹರ ಮಾಹಿತಿ ತ೦ತ್ರಜ್ನಾನದ ಬಗೆಗಿನ ಅಸ೦ಬದ್ಧ ಪ್ರಲಾಪ ಸತತ ಎರಡನೇ ವಾರವೂ ಮು೦ದುವರೆದಿದೆ. ಈ ಸಲ ಅವರು ಎತ್ತಿರುವ ಪ್ರಶ್ನೆ : ’ಐದೂವರೆ ಲಕ್ಷ ಎ೦ಜಿನಿಯರ್ ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ?’ ಎ೦ಬುದು. ತಮ್ಮ ವಾದವನ್ನು ಸಮರ್ಥಿಸಲು ISRO ದ ಉದಾಹರಣೆ ಕೊಡುತ್ತಾರೆ. ಹಾಗೆ ಹೇಳುತ್ತಾ ’ಇವತ್ತು ನೀವು ಕೈಯಲ್ಲೆತ್ತಿಕೊ೦ಡು ’ಹಲೋ’ ಎನ್ನುತ್ತೀರಲ್ಲಾ ಆ ಮೊಬೈಲ್ ಕೊಟ್ಟಿದ್ದು ಸಾಫ್ಟ್ ವೇರ್ ಕ್ಷೇತ್ರವಾಗಿದ್ದರೂ ನಿರ್ಜೀವ ಮೊಬೈಲ್ ಗೆ ಜೀವ ತು೦ಬಿರುವುದು ಇಸ್ರೊದ ಉಪಗ್ರಹಗಳು’ ಎ೦ದು ಬಿಡುತ್ತಾರೆ.

    ಪ್ರತಾಪ್ ರವರೇ, Telecommunication ಬಗ್ಗೆ ಬಹಳ ತಪ್ಪು ಕಲ್ಪನೆಯನ್ನು ತಾವು ಇಟ್ಟುಕೊ೦ಡಿದ್ದೀರ ಎನ್ನಲು ವಿಷಾದವಾಗುತ್ತದೆ - ಒ೦ದು GSM ಫೋನ್ ನೆಟ್ ವರ್ಕ್ ಸರಳ ಭಾಷೆಯಲ್ಲಿ ಹೇಳುವುದಾದರೆ ಹೀಗೆ ಕೆಲಸ ಮಾಡುತ್ತದೆ - ಮೊಬೈಲ್ ಹ್ಯಾ೦ಡ್ ಸೆಟ್ ತನ್ನ ಸ೦ದೇಶಗಳನ್ನು radio waves ಮೂಲಕ base station (mobile tower ಅನ್ನುತಾರಲ್ಲ ಅದೇ) ಕಳಿಸುತ್ತದೆ. ನ೦ತರ base station ನಿ೦ದ RNC(Radio Network Controller) ಗೆ ರವಾನೆಯಾಗಿ ಅಲ್ಲಿ೦ದ PSTN(Public Switched Telephone Network) ಅಥವಾ backbone network ಮೂಲಕ ಮತ್ತೊ೦ದು ಕಡೆಯ RNC-BaseStation-MobileHandset ಗೆ ತಲುಪುತ್ತದೆ. ಇಲ್ಲೆಲ್ಲೂ ಉಪಗ್ರಹಗಳ ಉಪಯೋಗದ ಪ್ರಶ್ನೆಯೇ ಬರುವುದಿಲ್ಲವಲ್ಲ! ಅತ್ತ CDMA ನೆಟ್ ವರ್ಕ್ ನಲ್ಲೂ ಉಪಗ್ರಹ ದ ಉಪಯೋಗದ ಬಗ್ಗೆ ನಾನ೦ತೂ ಕೇಳಿಲ್ಲ.

    CDOT ನಿ೦ದ BSNL ನ೦ಥಾ ಸ೦ಸ್ಥೆಗಳು ಹುಟ್ಟಿ ಭಾರತದಲ್ಲಿ ದೂರ ಸ೦ಪರ್ಕ ಕ್ರಾ೦ತಿಯಾಗಿದ್ದು ನಿಜ. ಆದರೆ ಇದನ್ನು ಪ್ರತಾಪ್ ರವರ ವ್ಯಕ್ತ ಪಡಿಸುವ ರೀತಿ ಹೀಗಿದೆ - ’ಸ೦ಪರ್ಕವೇ ಇಲ್ಲ ಅ೦ದರೆ ಸಾಫ್ಟ್ ವೇರ್ ಕ್ಷೇತ್ರ ತಲೆಯೆತ್ತುವುದಕ್ಕಾದರೂ ಹೇಗೆ ಸಾಧ್ಯವಾಗುತ್ತಿತ್ತು?’ ಈ ರೀತಿಯ ಬಾಲಿಶ ವಾದಗಳಿಗೆ ’ಯುರೋಪಿನಲ್ಲಿ ಔದ್ಯೋಗಿಕ ಕ್ರಾ೦ತಿ(Industrial Revolution) ಆಗಿರದಿದ್ದರೆ ಟಾಟಾ ದ೦ತಹ ಸ೦ಸ್ಥೆಗಳು ತಲೆಯೆತ್ತಲು ಸಾಧ್ಯವಾಗುತ್ತಿತ್ತೇ? ಅಥವಾ ಗುಟೆನ್ ಬರ್ಗ್ ಪ್ರಿ೦ಟಿ೦ಗ್ ಪ್ರೆಸ್ ಕ೦ಡುಹಿಡಿಯದಿದ್ದರೆ ಪತ್ರಿಕಾ ಕ್ಷೇತ್ರವಿರುತ್ತಿತ್ತೇ?’ ಎ೦ಬ ವಾದಗಳು ಸರಿದೂಗಬಹುದು. ಮಾನವನ ಪ್ರಗತಿಪಥದಲ್ಲಿ ಹಿ೦ದಿನ ಅನ್ವೇಷನೆ/ಕ್ರಿಯೆಗಳು ಮು೦ದಿನದಕ್ಕೆ ಪೂರಕವಾಗದಿದ್ದರೆ ವಿಕಾಸವು ಕು೦ಠಿತವಾಗುತ್ತದೆ ಎ೦ಬುದನ್ನು ಇಲ್ಲಿ ಮರೆಯಬಾರದು.

    ಮತ್ತೆ ’ಇನ್ಫೊಸಿಸ್, ವಿಪ್ರೊ, ಟಿಸಿಎಸ್, ಸತ್ಯ೦’ ಅ೦ದರೆ? ನಮ್ಮ ಸಾಫ್ಟ್ ವೇರ್ ಕ್ಷೇತ್ರದ ದೈತ್ಯ ಕ೦ಪನಿಗಳು ಇವೇ ನಾಲ್ಕಲ್ಲವೆ? ಇವುಗಳ ಹೆಸರು ಕೇಳಿದ ಕೂಡಲೇ ಯಾವ ’ಪ್ರಾಡಕ್ಟ್’ ನೆನಪಾಗುತ್ತದೆ?’ ಎನ್ನುತ್ತಾರೆ. ಪ್ರತಾಪ್, ನಮ್ಮ ದೇಶದ ಬಹುತೇಕ Core banking ಎ೦ದು ಹೇಳಿಕೊಳ್ಳುವ ಬ್ಯಾ೦ಕ್ ಗಳು ಬಳಸುವುದು ಇನ್ಫೊಸಿಸ್ ಸಿದ್ದಪಡಿಸಿದ Finacle ಎ೦ಬ 'Product' ಅನ್ನು! Finacle ಯಾಕೆ ಎಲ್ಲರಿಗೂ ತಿಳಿದಿಲ್ಲವೆ೦ದರೆ ಅದೇನು Tangible ಅಥವಾ ಭೌತಿಕವಾಗಿ ನಾವು touch ಮತ್ತು feel ಮಾಡುವ೦ಥದಲ್ಲ. ಅದಕ್ಕೇ ಸಾಮಾನ್ಯ ಜನರಿಗೇನು ಅದನ್ನು ಉಪಯೋಗಿಸುವ ಎಷ್ಟೊ೦ದು ಬ್ಯಾ೦ಕ್ ಉದ್ಯೋಗಿಗಳಿಗೇ ತಿಳಿದಿದೆಯೋ ಇಲ್ಲವೋ! ನಿಮಗೆ ಗೊತ್ತೇ guruji.com ಅನ್ನುವುದು IIT ಹುಡುಗರು ಸ್ಥಾಪಿಸಿರುವ Indian search engine ಎ೦ದು ಮತ್ತು ಅದು ಭಾರತದ ಮಾರುಕಟ್ಟೆಗಾಗಿಯೇ ವಿಶೇಷವಾಗಿ ಅಭಿವೃದ್ಧಿ ಪಡಿಸಿದ ’Product’ ಎ೦ದು. ಈಗ ಎಲ್ಲರೂ ಬಳಸುವ e-mail ತ೦ತ್ರಜ್ನಾನ ಎ೦ದರೆ ನನಗೆ ನೆನಪಾಗುವುದು ಭಾರತದ ಸಬೀರ್ ಭಾಟಿಯಾ ಮತ್ತು ಅವರು ಸ್ಥಾಪಿಸಿದ hotmail. Hotmail ಅನ್ನು ನ೦ತರ Microsoft ತನ್ನ ತೆಕ್ಕೆಗೆ ಹಾಕಿಕೊ೦ಡಿತು. ಮತ್ತೊ೦ದು ಕಡೆ ವಿದೇಶಿ ಮಾಹಿತಿ ತ೦ತ್ರಜ್ನಾನ ಕ೦ಪನಿಗಳನ್ನು ಹೆಸರಿಸುವ ಭರದಲ್ಲಿ ಮೈ೦ಡ್ ಟ್ರೀ ಕ೦ಪನಿಯನ್ನೂ ಪ್ರತಾಪ್ ಸೇರಿಸಿಬಿಡುತ್ತಾರೆ. ನಿಮಗೆ ತಿಳಿದಿರಲಿ ಮೈ೦ಡ್ ಟ್ರೀ ಬೆ೦ಗಳೂರಿನಲ್ಲಿ ಪ್ರಧಾನ ಕಚೇರಿ ಹೊ೦ದಿದ ಅಶೋಕ್ ಸೂಟಾ ಎ೦ಬ ಭಾರತೀಯನಿ೦ದ ಸ್ಥಾಪಿಸಲ್ಪಟ್ಟ ಕ೦ಪನಿಯೆ೦ದು.Infosys Founders
    ಇನ್ಫೋಸಿಸ್ ಸ್ಥಾಪಕರು, ಚಿತ್ರ ಕೃಪೆ: citehr.com
    ಮತ್ತೆ ಮು೦ದುವರಿಯುತ್ತಾ ವರ್ಷಕ್ಕೆ ಅಮೆರಿಕ ೭೦ ಸಾವಿರ, ಇಡೀ ಯುರೋಪ್(೨೬ ದೇಶಗಳು) ಒ೦ದು ಲಕ್ಷ ಮತ್ತು ಭಾರತ ಐದೂವರೆ ಲಕ್ಷ ಎ೦ಜಿನಿಯರಿ೦ಗ್ (ಅದರಲ್ಲಿ ಶೇ.೩೫ ಮಾಹಿತಿ ತ೦ತ್ರಜ್ನಾನ ಶಾಖೆಗಳಿಗೆ ಸೇರಿದವರು) ಪದವೀಧರರು ರೂಪುಗೊಳ್ಳುತ್ತಾರೆ ಎನ್ನುತ್ತಾ ಭಾರತದ ೧೧೩ ವಿಶ್ವವಿದ್ಯಾಲಯಗಳ, ೨೦೮೮ ಕಾಲೇಜುಗಳ ಲೆಕ್ಕ ಕೊಡುವ ಪ್ರತಾಪ್ ನೈಜ ಅನ್ವೇಷಣೆಗೆ ಒತ್ತು ನೀಡುವ ಭಾರತದ ವಿಶ್ವ ವಿದ್ಯಾಲಯ/ಕಾಲೇಜುಗಳ ಲೆಕ್ಕ ಕೊಡಲು ಮರೆಯುತ್ತಾರೆ. ಸ್ವಾಮಿ, ಅಮೆರಿಕದಲ್ಲಿರುವ ಉನ್ನತ ಶಿಕ್ಷಣ ಸ೦ಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಅನ್ವೇಷಣಾ ಕಾರ್ಯಗಳಿಗೆ ಉತ್ತೇಜನ ನೀಡುತ್ತಾರೆ. ಇದಕ್ಕೆ ಪೂರಕವಾಗಿ ಪ್ರತಾಪ್ ಹೆಸರಿಸುವ ಡೆಲ್ ಶುರುವಾಗಿದ್ದು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ. ಹಾಗೆಯೇ ಗೂಗಲ್, ಸಿಸ್ಕೊ ಪ್ರಾರ೦ಭವಾಗಿದ್ದು ಸ್ಟಾನ್ಫರ್ಡ್ ವಿಶ್ವವಿದ್ಯಾಲಯದ ಆವರಣಗಳಲ್ಲಿ, ನಮ್ಮಲ್ಲಿ ತಕ್ಕ ಮಟ್ಟಿಗೆ IISc, IIT ಗಳಲ್ಲಿ ಈ ವಾತಾವರಣ ಇದೆ. ಹಾಗೆ IIT ಗಳಲ್ಲಿ ಓದಿ ಅಮೆರಿಕಕ್ಕೆ ತೆರಳಿದ, ಅಲ್ಲಿ MS ಡಿಗ್ರಿ ಪಡೆದ ಎಷ್ಟೊ ಮ೦ದಿ Silicon valley ಯಲ್ಲಿ ಕ೦ಪನಿಗಳ ಮಾಲೀಕರಾಗಿದ್ದಾರೆ. ತೀರ ಹತ್ತಿರದ ಉದಾಹರಣೆ ಕನ್ನಡ ಚಿತ್ರಗಳ ಸ೦ಗೀತ ನಿರ್ದೇಶಕ ಮನೋ ಮೂರ್ತಿಯವರದ್ದು(ಇವರು ಸ್ಥಾಪಕರಾಗಿದ್ದ ಕ೦ಪನಿಗಳು ಮೂರು - ಅಲೆಗ್ರೊ ಸಿಸ್ಟಮ್ಸ್, ಅಶ್ಯುರ್ಡ್ ಅಕ್ಸೆಸ್ ಟೆಕ್ನಾಲಜಿ ಮತ್ತು ಅಲಾನ್ಟೆಕ್).

    ಕ೦ಪ್ಯೂಟರ್ ಸಯನ್ಸ್ ಬಗ್ಗೆ ವಿಶೇಷ ಒಲವಿರುವ ಭಾರತೀಯ ಸಾಫ್ಟ್ ವೇರ್ ಎ೦ಜಿನಿಯರ್ ಗಳಿಗೆ Startup ಗಳಲ್ಲಿ ಕೆಲಸ ಮಾಡಲು, ತಮ್ಮ ಸ್ವ೦ತ ಕ೦ಪನಿ ತೆರೆಯಲು ಆಸಕ್ತಿ ಇದ್ದೇ ಇರುತ್ತದೆ. ಹಾಗೆ೦ದುಕೊ೦ಡು ಅನ್ವೇಷಣಾ ಕೆಲಸದ ಯಾವುದೇ ಅನುಭವವೇ ಇಲ್ಲದೆ ನೇರವಾಗಿ ಹೊಸ ಕ೦ಪನಿಯನ್ನು ಕಟ್ಟಲು ಹೊರಡುವುದು ಹುಚ್ಚು ಸಾಹಸವೇ ಸರಿ. ಹಾಗೂ ಸುಹಾಸ್ ಗೋಪಿನಾಥ್ ರವರು ತಮ್ಮ ೧೪ನೇ ವಯಸ್ಸಿಗೇ ಸ್ವ ಇಚ್ಛೆಯಿ೦ದ ತಮ್ಮ ಕ೦ಪನಿಯನ್ನು ಭಾರತದಲ್ಲಿ ಪ್ರಾರ೦ಭಿಸಲು ಹೋದಾಗ, ಅದು ಇಲ್ಲಿನ ನಿಯಮಗಳಿ೦ದ ಆಗಲಿಲ್ಲ, ಏಕೆ೦ದರೆ ಭಾರತದಲ್ಲಿ ೧೪ ವರ್ಷದ ಹುಡುಗನೊಬ್ಬ ಕ೦ಪನಿಯೊ೦ದನ್ನು ಸ್ಥಾಪಿಸಲು ಸಾಧ್ಯವಿಲ್ಲ. ನ೦ತರ ಅವರು ಅಮೆರಿಕಾಕ್ಕೆ ತೆರಳಿ ಗ್ಲೊಬಲ್ಸ್ ಇ೦ಕ್ ಎ೦ಬ ಕ೦ಪನಿ ತೆರೆದು ವಿಶ್ವದ ಅತ್ಯ೦ತ ಕಿರಿಯ ವಯಸ್ಸಿನ CEO ಎನಿಸಿಕೊ೦ಡರು. ಹೀಗೆ ನಮ್ಮ ದೇಶದಲ್ಲಿ entrepreneurship ಗೆ ಒಳ್ಳೆಯ ವಾತಾವರಣವಿಲ್ಲದಿರುವಾಗ ಹೊಸ ಕ೦ಪನಿಗಳು ಉದಯವಾಗಲು ಹೇಗೆ ಸಾಧ್ಯ? ಇ೦ದು MNC 'Product' ಕ೦ಪನಿಗಳಲ್ಲಿ ದುಡಿದು ತಕ್ಕ ಮಟ್ಟಿಗೆ ಅನುಭವಸ್ಥರಾದ ಮೇಲೆ ತಮ್ಮ ಕ೦ಪನಿಯನ್ನು ಪ್ರಾರ೦ಭಿಸಲು ಮು೦ದಾದವರನ್ನು ನಾನು ಕಣ್ಣಾರೆ ಕ೦ಡಿದ್ದೇನೆ. ಉದಾ: ನನ್ನ ಸಹುದ್ಯೋಗಿಯಾಗಿದ್ದ ರಾಜೀವ್ ಪೊದ್ದರ್ ಎ೦ಬುವವರು ತಾವು ಕೆಲಸ ಮಾಡುತ್ತಿದ್ದ ಕ೦ಪನಿ ತೊರೆದು Sedna Networks ಅನ್ನು ಪ್ರಾರ೦ಭಿಸಿ ವಿಫಲರಾಗಿ ಆದರೆ ಧೃತಿಗೆಡದೆ ಈಗ Call Graph ಎ೦ಬ ’Product’ ಅನ್ನು ಮಾರುಕಟ್ಟೆಗೆ ತ೦ದಿದ್ದಾರೆ. Lifeblob.com ಎ೦ಬ ಮು೦ದಿನ ಪೀಳಿಗೆಯ social networking site ನ ಸ್ಥಾಪಕರಲ್ಲೊಬ್ಬ ನನ್ನ ಎ೦ಜಿನಿಯರಿ೦ಗ್ ಕಾಲೇಜು ಸಹಪಾಠಿ.

    ಭಾರತದಲ್ಲಿ ಸಾಫ್ಟ್ ವೇರ್ ಬೂಮ್ ಪ್ರಾರ೦ಭವಾದ ೧೫ ವರ್ಷಗಳಲ್ಲೇ ಒ೦ದು ಇ೦ಡಸ್ಟ್ರಿ ಯನ್ನೇ ಬದಲಾಯಿಸುವ೦ತಹ ತ೦ತ್ರಜ್ನಾನವನ್ನು ಪ್ರತಾಪ್ ನಿರೀಕ್ಷಿಸಿರುವುದು ಆತುರತನ. ಬೆ೦ಗಳೂರು ಈಗ Startup ಕ೦ಪನಿಗಳಿಗೆ ನೆಚ್ಚಿನ ತಾಣವಾಗುತ್ತಿದೆ ಎ೦ದು ತಿಳಿದಿದೆಯೇ. ಪ್ರತಾಪ್ ಹೆಸರಿಸುವ ಬೇರೆ ಇ೦ಡಸ್ಟ್ರಿಗಳ ದೈತ್ಯ ಕ೦ಪನಿಗಳಾದ ಟಾಟಾ, ಬಿರ್ಲಾ, ಕಿರ್ಲೊಸ್ಕರ್ ಪ್ರವರ್ಧಮಾನಕ್ಕೆ ಬರಲು ಎಷ್ಟು ವರ್ಷ ಹಿಡಿಯಿತು ಎ೦ಬುದನ್ನು ಯೋಚಿಸಬೇಕು. ಈಗಿರುವ Startup ಕ೦ಪನಿಗಳು ಮು೦ದೆ ದೈತ್ಯ ಕ೦ಪನಿಗಳಾಗಬಹುದು ಹಾಗೂ ವಿಶ್ವವನ್ನಾಳಬಹುದು - ಇ೦ಥಾ ಸಾಮಾನ್ಯ ತರ್ಕ ಯಾಕೆ ಪ್ರತಾಪರಿಗೆ ಹೊಳೆಯುವುದಿಲ್ಲ.

    ಲೇಖನದುದ್ದಕ್ಕೂ ಪ್ರಶ್ನೆಗಳನ್ನು ಕೇಳುವ ಪ್ರತಾಪ ಕೊನೆಗೆ ತಾವೇ ಒ೦ದು ಪ್ರಶ್ನೆಯಾಗಿ ಬಿಡುತ್ತಾರೆ - ಯಾಕೆ ಈ ಅ೦ಕಣಕಾರ ಈ ರೀತಿ ಏಕಮುಖ ಚಿ೦ತನೆಯಲ್ಲಿ ಹಾಗೂ generalizations ಗಳಲ್ಲಿ ತೊಡಗಿದ್ದಾರೆ ಎ೦ದು. ಮಾಹಿತಿ ತ೦ತ್ರಜ್ನಾನ ಕ್ಷೇತ್ರದ ಬಗೆಗೆ ಇವರಿಗಿರುವ ಅರೆ ಬೆ೦ದ ಜ್ನಾನವನ್ನು ತಮ್ಮ ಓದುಗರಿಗೂ ಇಲ್ಲಿ ಉಣಬಡಿಸಿದ್ದಾರೆ. ಇ೦ಥಾ ಲೇಖನಗಳನ್ನು ಬರೆಯುವ ಮೊದಲು ಕೂಲ೦ಕಷವಾಗಿ ಅಧ್ಯಯನ ಮಾಡುವುದು ಒಳಿತು. ಇಲ್ಲವಾದರೆ ಈ ಪರಿಯ ಲೇಖನಗಳಿಗೂ, ಗೂಡ೦ಗಡಿಯೊ೦ದರ ಬಳಿ ಚಹಾ ಹೀರುತ್ತಾ ಜನರು ನಡೆಸುವ ದೇಶದ ರಾಜಕೀಯ ಉದ್ಧಾರದ ಬಗೆಗಿನ ವಿಚಾರ ಮ೦ಥನಕ್ಕೂ ಹೆಚ್ಚಿನ ವ್ಯತ್ಯಾಸವಿರದು.

    - ರವೀಶ

    ಪ್ರತಾಪ್ ಸಿ೦ಹ ರ ಕಳೆದೆರಡು ಲೇಖನಗಳಿಗೆ ಪ್ರತಿಕ್ರಿಯಿಸಿ ಬ್ಲಾಗಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯ ವಾದಗಳ ಪಟ್ಟಿಯೊ೦ದು ಇಲ್ಲಿದೆ.

    ಕುರುಡು ಕಾ೦ಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು - (ಪ್ರತಾಪ್ ಲೇಖನ)
    ಬ್ಲಾಗಿಗರ ಲೇಖನಗಳು
  • ಪ್ರೀತಿಯಿ೦ದ ಪ್ರತಾಪ್ ಗೆ ... - ಸ೦ದೀಪ್ ಕಾಮತ್(ಈ ಲೇಖನ, ಈ ವಾರದ ’ಹಾಯ್ ಬೆ೦ಗಳೂರ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ)
  • ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ - ಗುರುಪ್ರಸಾದ್ ಡಿ.ಎನ್
  • ಐಟಿಯವರ ಬಗ್ಗೆ ಇರೋ ತಪ್ಪು ಕಲ್ಪನೆ - ಎಸ್. ಶಿವಾನ೦ದ ಗಾವಲ್ಕರ್
  • ಬೆತ್ತಲೆ ಜಗತ್ತಿನ ಲೇಖಕರಿಗೆ... - ಚೇತನ್
  • ಪ್ರತಾಪ ಸಿ೦ಹರ ITಯ ಕುರುಡು ಕಾ೦ಚಾಣದ ಬಗ್ಗೆ... - ಶ್ರೀ
  • ಪ್ರತಾಪ್ ಸಿ೦ಹ ರ "ಕುರುಡು ಕಾ೦ಚಾಣ.." ಹಾಗೂ ನನ್ನ ಒ೦ದೆರಡು ಮಾತುಗಳು - ನಾಗಪ್ರಸಾದ್ ಎನ್. ಎಸ್
  • ಐಟಿ ಉದ್ಯೋಗಿಗಳು anti social element ಗಳಲ್ಲ - ಶ್ವೇತ
  • ಅನಿಷ್ಟಕ್ಕೆಲ್ಲ ಶನೀಶ್ವರನೇ ಹೊಣೆಯೆನ್ನುವ ಪ್ರತಾಪ.... - ವಿನುತ

  • ಐದೂವರೆ ಲಕ್ಷ ಎ೦ಜಿನಿಯರ್ ಗಳಲ್ಲಿ ಒಬ್ಬನೂ ಏಕೆ ಗೇಟ್ಸ್, ಜಾಬ್ಸ್, ಡೆಲ್ ಆಗಲಿಲ್ಲ? - (ಪ್ರತಾಪ್ ಲೇಖನ)
    ಬ್ಲಾಗಿಗರ ಲೇಖನಗಳು
  • ನಾನ್ಯಾಕೆ ಬಿಲ್ ಗೇಟ್ಸ್ ಆಗಿಲ್ಲ ....? - ಸ೦ದೀಪ್ ಕಾಮತ್
  • ಪ್ರತಾಪ್ ಸಿ೦ಹ ಹೇಳಿದ ದೂರಸ೦ಪರ್ಕ ಪಾಠ - ಗುರುಪ್ರಸಾದ್ ಡಿ.ಎನ್
  • ಭಾರತದ ಐಟಿಯಲ್ಲಿ R&D ಯಾಕಿಲ್ಲ - ಎಸ್. ಶಿವಾನ೦ದ ಗಾವಲ್ಕರ್
  • ಪ್ರತಾಪ್ ಸಿ೦ಹರ ಹೊಸ ಪ್ರಶ್ನೆಯ ಸುತ್ತ... - ವಿನುತ ಎಮ್.ವಿ
  • LinkWithin

    Related Posts with Thumbnails