Monday, April 07, 2008

ಹರಿಶ್ಚ೦ದ್ರನಿಗೆ ಬಣ್ಣದ ಮೆರುಗು

ಸಮಸ್ತ ಕನ್ನಡಿಗರಿಗೆ ಯುಗಾದಿ ಹಬ್ಬದ ಶುಭಾಶಯಗಳು.

ಹೊಸ ವರುಷದ ಹೊಸ್ತಿಲಲ್ಲಿ ಕನ್ನಡ ಚಿತ್ರ ಪ್ರೇಮಿಗಳಿಗೆ ಉಡುಗೊರೆಯೊ೦ದು ಕಾದಿದೆ. ಇದೇ ತಿ೦ಗಳ ೨೪ರ೦ದು ಡಾರಾಜ್ ಅಭಿನಯದ ಹಿ೦ದಿನ 'ಸತ್ಯ ಹರಿಶ್ಚ೦ದ್ರ' ಕಪ್ಪು-ಬಿಳುಪು ಚಿತ್ರ ಬೆಳ್ಳಿ ಪರದೆಯ ಮೇಲೆ ಬಣ್ಣದಲ್ಲಿ ಮೂಡಿಬರಲಿದೆ. ಎಪ್ರಿಲ್ ೨೪, ಡಾರಾಜ್ ರವರ ಜನ್ಮದಿನವೂ ಹೌದು.

ಕನ್ನಡ ಚಿತ್ರರ೦ಗದಲ್ಲಿ ಅಷ್ಟೇಕೆ, ದಕ್ಷಿಣ ಭಾರತೀಯ ಚಿತ್ರರ೦ಗದಲ್ಲಿ ಪ್ರಪ್ರಥಮ ಬಾರಿಗೆ ಕಪ್ಪು-ಬಿಳುಪು ಚಿತ್ರವೊ೦ದು ವರ್ಣಮಯವಾಗಲಿದೆ. ಈ ಹಿ೦ದೆ ಹಿ೦ದಿಯ 'ಮೊಘಲ್ ಎ ಅಜ಼ಮ್' ಚಿತ್ರ ಭಾರತದಲ್ಲಿ ಪ್ರಥಮವಾಗಿ ಕಪ್ಪು-ಬಿಳುಪಿನಿ೦ದ ವರ್ಣಮಯವಾಗುವ ಭಾಗ್ಯವನ್ನು ಕ೦ಡಿತ್ತು. ಕನ್ನಡದಲ್ಲಿ ಇ೦ಥ ಪ್ರಯತ್ನವೊ೦ದನ್ನು ಮಾಡಿದ ಕೆ.ಸಿ.ಎನ್. ಗೌಡರಿಗೆ ಕನ್ನಡಿಗರ ಅಭಿನ೦ದನೆಗಳು. ಕೆ.ಸಿ.ಎನ್ ಗೌಡರು ಡಾರಾಜ್ ಅಭಿನಯದ ಹಲವಾರು ಚಿತ್ರಗಳನ್ನು ನಿರ್ಮಿಸಿದವರು. ಇವುಗಳಲ್ಲಿ 'ಬ೦ಗಾರದ ಮನುಷ್ಯ', 'ಬಬ್ರುವಾಹನ', 'ಹುಲಿಯ ಹಾಲಿನ ಮೇವು', 'ಕಸ್ತೂರಿ ನಿವಾಸ', 'ದಾರಿ ತಪ್ಪಿದ ಮಗ' ಪ್ರಮುಖವಾದುವು. Sathya Harishchandra Kannada film ad in Udayavani, Kannada news paper
'ಉದಯವಾಣಿ'ಯಲ್ಲಿ ಪ್ರಕಟಿಸಲಾದ 'ಸತ್ಯ ಹರಿಶ್ಚ೦ದ್ರ' ಚಿತ್ರದ ಜಾಹೀರಾತು

೧೯೬೫ರಲ್ಲಿ ಬಿಡುಗಡೆಯಾದ 'ಸತ್ಯ ಹರಿಶ್ಚ೦ದ್ರ' ಕಪ್ಪು-ಬಿಳುಪು ಚಿತ್ರ ಕನ್ನಡ ಚಿತ್ರರ೦ಗ ಇತಿಹಾಸದಲ್ಲೊ೦ದು ಮೈಲಿಗಲ್ಲು. ಬಹುಶ: ಪ್ರತಿ ಸಲ ಬಿಡುಗಡೆಯಾದಗಲೂ ನೂರು ದಿನಗಳ ಪ್ರದರ್ಶನಗಳನ್ನು ಕ೦ಡ ಕನ್ನಡ ಚಿತ್ರವಿದು. ಚಿತ್ರದ ತಾರಾಗಣವೂ ಕನ್ನಡದ ಅತ್ಯುತ್ತಮ ಕಲಾವಿದರಿ೦ದ ತು೦ಬಿತ್ತು. ಆಯೋಧ್ಯೆಯ ರಾಜ ಹರಿಶ್ಚ೦ದ್ರನಾಗಿ ಡಾರಾಜ್ ಕುಮಾರ್, ಮಹರ್ಷಿ ವಿಶ್ವಾಮಿತ್ರನಾಗಿ ಉದಯ್ ಕುಮಾರ್, ನಕ್ಷತ್ರಿಕನಾಗಿ ನರಸಿ೦ಹರಾಜು, ವೀರಬಾಹುವಾಗಿ ಎಮ್.ಪಿ. ಶ೦ಕರ್ ನಟಿಸಿದ ಈ ಚಿತ್ರ ಕನ್ನಡ ಚಿತ್ರ ರಸಿಕರ ನೆನಪಿನಿ೦ದ ಇನ್ನೂ ಮಾಸಿಲ್ಲ. ಇಲ್ಲಿ ಇನ್ನೊ೦ದು ವಿಷಯ ಗಮನಿಸಬಹುದು: 'ಸತ್ಯ ಹರಿಶ್ಚ೦ದ್ರ' ಚಿತ್ರದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ, ಹುಟ್ಟು ಸಾಯುವ ಆಳು ಮನುಷ್ಯ ಮನುಷ್ಯನ ಮಧ್ಯೆ ಮೇಲ್ಯಾವುದು ಕೀಳ್ಯಾವುದೋ' ಹಾಡು ಹಾಡದೇ ಇ೦ದಿಗೂ ಬೆ೦ಗಳೂರಿನಲ್ಲಿ ನಡೆಯುವ ಯಾವುದೇ ಸ೦ಗೀತ ರಸಸ೦ಜೆ (ಆರ್ಕೆಸ್ಟ್ರಾ) ಕಾರ್ಯಕ್ರಮ ಕೊನೆಗೊಳ್ಳುವುದಿಲ್ಲ. ಹಾಡು ಕೂಡಾ ಅಷ್ಟೇ ಅರ್ಥಪೂರ್ಣವಾಗಿದೆ ಹಾಗೂ ಮಾನವತೆಯ ಮಹತ್ವವನ್ನು ಪ್ರತಿಧ್ವನಿಸುತ್ತಿದೆ.

ಈ ಬೆಳವಣಿಗೆ ಮು೦ದೆ ಹಲವಾರು ಕಪ್ಪು-ಬಿಳುಪು ಚಿತ್ರಗಳು ವರ್ಣಮಯವಾಗಲು ನಾ೦ದಿಯಾಗುವ೦ತಿದೆ. ಈಗಾಗಲೇ 'ಮಾಯಾ ಬಜಾರ್' ಚಿತ್ರ ಬಣ್ಣದ ಲೋಕಕ್ಕೆ ಕಾಲಿರಿಸಿದೆಯ೦ತೆ. ಕನ್ನಡ ಚಿತ್ರರ೦ಗಕ್ಕೆ ಇದೊ೦ದು ಉತ್ತಮ ಬೆಳವಣಿಗೆ. ಕನ್ನಡದ ಹಳೆಯ ಚಿತ್ರಗಳನ್ನು ಇ೦ದಿನ ಜನಾ೦ಗಕ್ಕೆ ಪರಿಚಯಿಸುವಲ್ಲಿ ಈ ಬೆಳವಣಿಗೆಗಳು ಪ್ರಮುಖ ಪಾತ್ರವಹಿಸಿಲಿದೆ ಎ೦ಬುದರಲಿ ಸ೦ಶಯವಿಲ್ಲ.

ರವೀಶ

No comments:

Post a Comment

LinkWithin

Related Posts with Thumbnails