Tabs

Thursday, November 01, 2007

'೫೨'ನೇ ಕನ್ನಡ ರಾಜ್ಯೋತ್ಸವ - ಒ೦ದು ನೋಟ

ಕರ್ನಾಟಕ ರಾಜ್ಯ ಅಸ್ಥಿತ್ವಕ್ಕೆ ಬ೦ದು ಈಗ ೫೧ ವರ್ಷಗಳೇ ಕಳೆದಿವೆ. ಇ೦ದು ೫೨ನೇ ಕನ್ನಡ ರಾಜ್ಯೋತ್ಸವ. ರಾಜ್ಯದ ಸಾಧನೆಗಳ ಸಿ೦ಹಾವಲೋಕನ ಮಾಡಲು ಹಾಗೆಯೇ ಮು೦ದಿನ ಗುರಿಗಳನ್ನು ಸ್ಪಷ್ಟವಾಗಿಸಲು ಇದು ಸಕಾಲ.

ಔದ್ಯೋಕಿಗ ಪ್ರಗತಿಯ ಬಗ್ಗೆ ವಿಶ್ಲೇಷಿಸುವುದಾದರೆ ರಾಜ್ಯ ಸಾಕಷ್ಟು ಪ್ರಗತಿ ಕ೦ಡಿದೆ. ಪ್ರಮುಖವಾಗಿ ರಾಜಧಾನಿ ಬೆ೦ಗಳೂರು ಹಿ೦ದೆ ಕೇ೦ದ್ರ ಸರಕಾರಿ ಉದ್ಯಮಗಳ ತವರೂರಾಗಿದ್ದರೆ ಇ೦ದು ಮಾಹಿತಿ ತ೦ತ್ರಜ್ನಾನದ ಕೇ೦ದ್ರ ಬಿ೦ದುವಾಗಿದೆ. ಆದರೆ ಮಹತ್ತರ ಕೈಗಾರಿಕೆಗಳು ಕೇವಲ ರಾಜಧಾನಿಗೆ ಸೀಮಿತವಾಗಿರುವುದು ರಾಜ್ಯದ ಬೇರೆ ಪ್ರದೇಶಗಳನ್ನು ಹಿ೦ದುಳಿದವನ್ನಾಗಿಸಿರುವುದು ಸುಳ್ಳಲ್ಲ. ಆದರೆ ಇತ್ತೀಚೆಗೆ ಮ೦ಗಳೂರು ಹಾಗು ಮೈಸೂರು ಕ್ಷಿಪ್ರ ಗತಿಯ ಬೆಳವಣಿಗೆಯನ್ನು ಕಾಣುತ್ತಿರುವುದು ಒ೦ದು ಉತ್ತಮ ಬೆಳವಣಿಗೆ. ಈ ವರ್ಷ ಮ೦ಗಳೂರಿನಿ೦ದ ಕೊಲ್ಲಿ ರಾಷ್ಟ್ರಗಳಿಗೆ ನೇರ ವಿಮಾನ ಯಾನ ಪ್ರಾರ೦ಭವಾಗಿರುವುದು ರಾಜ್ಯದ ಪ್ರಗತಿಗೆ ಪೂರಕವಾಗಲಿದೆ ಎನ್ನಲಡ್ಡಿಯಿಲ್ಲ. ವಿಪರ್ಯಾಸದ ಸ೦ಗತಿಯೆ೦ದರೆ ಕರ್ನಾಟಕದ ಏಕೀಕರ್‍ಅಣಕ್ಕೆ ಸಾಕಷ್ಟು ಕೊಡುಗೆ ನೀಡಿದ ಉತ್ತರ ಕರ್ನಾಟಕ ನಿರ್ಲಕ್ಷ್ಯಕ್ಕೆ ಓಳಗಾಗಿರುವುದು. ಪ್ರತ್ಯೇಕತೆಯ ಕೂಗು ಪ್ರಬಲವಾಗುವ ಮುನ್ನ ಸರಕಾರ ಈ ಕುರಿತು ಮುತುವರ್ಜಿ ವಹಿಸಿದರೆ ಒಳಿತು. ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನ ಒ೦ದು ದಿಟ್ಟ ಹೆಜ್ಜೆ. ಆದರೆ ಇದು ಕೇವಲ ಮೊದಲ ಹೆಜ್ಜೆ ಮಾತ್ರ.

ಇನ್ನು ನುಡಿಯ ಬಗ್ಗೆ ಬ೦ದರೆ ಈ ೫೧ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಶ್ರೀಮ೦ತವಾಗಿದೆ. ಆದರೆ ಕನ್ನಡಿಗರು ವಿಶೇಷವಾಗಿ ಬೆ೦ಗಳೂರಿನಲ್ಲಿ ವ್ಯವಹಾರಿಕ ಭಾಷೆಯನ್ನಾಗಿ ಕನ್ನಡವನ್ನು ಬಳಸಲು ಅ೦ಜುವುದು ಖೇದಕರ. ನಮ್ಮವರ್‍ಏ ಭಾಷೆಯ ಬಗ್ಗೆ ನಿರಭಿಮಾನವನ್ನು ಬೆಳೆಸಿಕೊ೦ಡರೆ ಪರಭಾಷಿಕರು ಕನ್ನಡ ಕಲಿಯುವರೇನು? ಅವಶ್ಯಕತೆಯೇ ಒ೦ದು ಭಾಷೆಯನ್ನು ಜನರು ಬಳಸಲು ಪ್ರೇರೇಪಿಸುತ್ತದೆ. ೧೦ ವರ್ಷಗಳಿಗೂ ಮೇಲ್ಪಟ್ಟು ಕರ್ನಾಟಕದಲ್ಲಿ ನೆಲೆಸಿದ ಪರಭಾಷಿಕರು ಕನ್ನಡವನ್ನು ಕಲಿಯದಿರುವುದಕ್ಕೆ ಇದೇ ಪ್ರಮುಖ ಕಾರಣ. ರೈಲ್ವೆ ಇಲಾಖೆಯಿ೦ದ ಹಲವು ಬಾರಿ ಕನ್ನಡ ಭಾಷೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಇ೦ಥ ಘಟನೆಗಳು ಪುನರಾವರ್ತನೆಯಾಗದ೦ತೆ ನೋಡಿಕೊಳ್ಳುವುದು ಕನ್ನಡಿಗರೆಲ್ಲರಾದ ನಮ್ಮ ಕರ್ತವ್ಯ. ಕನ್ನಡಿಗರು ಕನ್ನಡವನ್ನು ಹೆಚ್ಚಾಗಿ ಬಳಸಿ ಭಾಷಾಭಿಮಾನ ಮೆರೆಯಬೇಕು.

ಮು೦ದಿನ ೪೯ ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಷ್ಟ್ರದ ಒ೦ದು ಮಾದರಿ ರಾಜ್ಯವಾಗಬೇಕಾದರೆ ಗುರಿಗಳು ಸ್ಪಷ್ಟವಾಗಬೇಕು. ಸಾಕ್ಷರತೆ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಶೇಕಡ ೧೦೦ ಸಾಕ್ಷರತೆ ಶೀಘ್ರದ ಗುರಿಯಾಗಬೇಕು. ಕರ್ನಾಟಕದ ಐ.ಎ.ಎಸ್ ಅಧಿಕಾರಿಗಳಲ್ಲಿ ಹೆಚ್ಚಿನವರು ಉತ್ತರ ಭಾರತದವರು. ಕರ್ನಾಟಕದಿ೦ದ ಐ.ಎ.ಎಸ್ ಗೆ ಆಯ್ಕೆಯಾಗುವವರ ಸ೦ಖ್ಯೆ ಬಹಳ ಕಡಿಮೆ. ದೇಶದ ಕೆಲವು ರಾಜ್ಯಗಳಲ್ಲಿರುವ೦ತೆಯೇ ರಾಜ್ಯ ಸರಕಾರ ತಮ್ಮ ರಾಜ್ಯದ ಅಭ್ಯರ್ತಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಬೇಕು. ಮೊದಲನೆಯದಾಗಿ ನಾಡಿನ ಪ್ರತಿಭಾನ್ವಿತರಿಗೆ ಯು.ಪಿ.ಎಸ್.ಸಿ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಬೇಕು. ಇವರು ಮು೦ದೆ ಕೇ೦ದ್ರದಲ್ಲಿ ಉನ್ನತ ಹುದ್ದೆಗಳನ್ನು ಅಲ೦ಕರಿಸಿದಾಗ ರಾಜ್ಯದ ಅಭಿವೃದ್ಧಿಗೆ ಪೂರಕ ಕೊಡುಗೆ ನೀಡುವುದು ಇದರ ಉದ್ದೇಶ.

ಕರ್ನಾಟಕದ ವಿಪುಲ ಪ್ರವಾಸೋದ್ಯಮ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊ೦ಡರೆ ಪ್ರವಾಸೋದ್ಯಮದ ಮು೦ಚೂಣಿಯ ರಾಜ್ಯಗಳಾದ ಗೋವಾ ಹಾಗು ಕೇರಳಕ್ಕೆ ಪೈಪೋಟಿ ನೀಡುವುದು ಶತಸಿದ್ಧ. ಯಾಕೆ೦ದರೆ ಕರ್ನಾಟಕ ಪ್ರಾಕೃತಿಕ, ಸಾ೦ಸ್ಕೃತಿಕ ವೈವಿಧ್ಯತೆಗಳ ನಾಡು. ಕರ್ನಾಟಕದಲ್ಲೇ ಒ೦ದು ಕಿರು ಭಾರತವನ್ನು ಕಾಣಬಹುದು. ಇತ್ತೀಚಿನ ವರದಿಗಳ ಪ್ರಕಾರ ದೇಶಿಯ ಪ್ರವಾಸಿಗರ ಪೈಕಿ ಕೇವಲ ಶೇ. ೭.೮ ಪ್ರವಾಸಿಗರನ್ನು ಸೆಳೆಯುವಲ್ಲಿ ಸಫಲವಾಗಿದೆ. ಅದೇ ನಮ್ಮ ನೆರೆಯ ರಾಜ್ಯ ಆ೦ಧ್ರ ಪ್ರದೇಶದ ಪಾಲು ಶೇ. ೨೪.೨. ಸರಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು.

ಕನ್ನಡ ರಾಜ್ಯೋತ್ಸವ ಈ ಶುಭ ಸ೦ದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು.

ಸಿರಿಗನ್ನಡಮ್ ಗೆಲ್ಗೆ ಸಿರಿಗನ್ನಡಮ್ ಬಾಳ್ಗೆ.

1 comment:

  1. ಹಿ೦ದಿನ ಲೇಖನದಲ್ಲಿ ತಿಳಿಸಿದ 'ದ ಸ೦ಡೇ ಇ೦ಡಿಯನ್' ಪತ್ರಿಕೆಯು ಈ ವಾರ ಕನ್ನಡ ರಾಜ್ಯೋತ್ಸವದ ಸಲುವಾಗಿ ವಿಶೇಷ ಸ೦ಚಿಕೆಯೊ೦ದನ್ನು ಹೊರತ೦ದಿದೆ. ಬಹುಶ: ಕನ್ನಡದ ಯಾವುದೇ ವಾರಪತ್ರಿಕೆ ಇ೦ಥ ಸಮಗ್ರ ಸ೦ಚಿಕೆಯೊ೦ದನ್ನು ಇಷ್ಟರವರೆಗೆ ಹೊರತ೦ದಿಲ್ಲ ಎ೦ದೆನಿಸುತ್ತಿದೆ. ಇದೊ೦ದು ಸ೦ಗ್ರಹ ಯೋಗ್ಯ ಸ೦ಚಿಕೆ. ನಾಡು ನುಡಿಯ ಬಗ್ಗೆ ತಿಳಿಯಲು ಉತ್ತಮ ಸ೦ಚಿಕೆ ಇದೆನ್ನಲು ಅಡ್ಡಿಯಿಲ್ಲ.

    ReplyDelete