ಇಲ್ಲಿ ವಾದ-ಪ್ರತಿವಾದಗಳ ಮುಖ್ಯ ಅಂಶಗಳನ್ನು ಗಮನಿಸಬೇಕು. ಭಾಷೆ-ಸಂಸ್ಕೃತಿಯ ಬಗ್ಗೆ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸಲು, ಗೌರವಿಸಲು ಪಾಠಶಾಲಾ ಕಲಿಕೆ ಮೊದಲ ಹೆಜ್ಜೆ. ನಾಡು-ನುಡಿವಿನ ಬಗ್ಗೆ ಅರಿವು, ಆದರ ಹೀಗೆ ಬಾಲ್ಯದಲ್ಲಿ ಆರಂಭವಾಗುತ್ತದೆ. ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಆ೦ಗ್ಲಮಾಧ್ಯಮದಲ್ಲಿ ಓದಿಸಲು ಮು೦ದಾಗುತ್ತಾರೆ. ಇದು ಇ೦ದಿನ ಅಗತ್ಯ ಕೂಡ. ಆಂಗ್ಲ ಭಾಷೆ ಇ೦ದಿನ ಜಾಗತೀಕರಣದ ಯುಗದಲ್ಲಿ ಯಶಸ್ಸಿನ ಹಲವು ಸೂತ್ರಗಳಲ್ಲಿ ಒ೦ದಾಗಿರುವುದು ಇದಕ್ಕೆ ಕಾರಣವಿರಬಹುದು. ಇದಕ್ಕೇ ಇರಬೇಕು ಆರ್ಥಿಕವಾಗಿ ದುರ್ಬಲರೂ ಕೂಡ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಸಲು ಮು೦ದಾಗಿರುವುದು.
ಸಾಮನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಲ್ಲಿ ಕಾಲೇಜು ಸೇರುವಾಗ ಅಥವಾ ನ೦ತರ ಕೆಲಸ ಹುಡುಕುವಾಗ ಆಂಗ್ಲ ಮಾಧ್ಯಮದಲ್ಲಿ ಓದಿದವರಿಗಿಂತ ತಾವು ಕಡಿಮೆಯೇನೋ ಎ೦ದೆನಿಸಿ ಕೀಳರಿಮೆ, ಆತ್ಮವಿಶ್ವಾಸದ ಕೊರತೆ ಕಂಡುಬರುತ್ತದೆ. ಅದಕ್ಕೆ ಸರಕಾರದ ಈ ಕ್ರಮ ಪರಿಹಾರವಾಗಬಹುದೇನೋ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಕಂಡುಬರುವ ತಾರತಮ್ಯ ಹೀಗೆ ಕಡಿಮೆಯಾದರೆ ಸಂತೋಷ. ಹಾಗೇಯೇ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಿರಲಿ. ನಮ್ಮ ಹಲವಾರು ಹೆಸರಾಂತ ವಿಜ್ನಾನಿಗಳು, ಸಾಧಕರು ಆಂಗ್ಲ ಮಾಧ್ಯಮ ದಲ್ಲಿ ಓದಿದವರಲ್ಲ. ಸಾಧನೆಗೆ ಜ್ನಾನ ಮುಖ್ಯವೇ ಹೊರತು ಭಾಷೆಯಲ್ಲ. ಭಾಷೆಯು ಅಭಿವ್ಯಕ್ತಪಡಿಸುವ ಮಾಧ್ಯಮವಷ್ಟೆ.
ಕೊನೆಯಲ್ಲೊಂದು ಮಾತು. ಭಾರತದ ಇಂದಿನ ಶಿಕ್ಷಣ ಪದ್ಧತಿಯ ಹರಿಕಾರ, ಮೆಕಾಲೆ ಬ್ರಿಟಿಷ್ ಸಂಸತ್ತಿಗೆ ನೀಡಿದ ವಿವರಣೆಯಲ್ಲಿ ಹೀಗೆ ಹೇಳಿದ್ದಾನೆ : "ಭಾರತದಂತಹ ಸಂಪತ್ಭರಿತ, ಉನ್ನತ ಮೌಲ್ಯಗಳುಲ್ಲ ಜನರಿರುವ ದೇಶವನ್ನು ನಾವು ಜಯಿಸುವುದು ಅಸಾಧ್ಯವೆನಿಸುತ್ತಿದೆ. ನಾವಿಲ್ಲಿ ನಮ್ಮ ಪ್ರಭುತ್ವ ಸಾಧಿಸಬೇಕಾದರೆ ಈ ದೇಶದ ಸನಾತನ ಶಿಕ್ಷಣ ಪದ್ಧತಿಯನ್ನು ಬದಲಾಯಿಸಬೇಕು. ಎಂದು ಭಾರತೀಯರು ತಮ್ಮ ಭಾಷೆ, ಸಂಸ್ಕೃತಿಗಿಂತ ಆಂಗ್ಲ ಭಾಷೆ, ಪಾಶ್ಚ್ಯಾತ್ಯ ಸಂಸ್ಕೃತಿ ಶ್ರ್‍ಏಷ್ಠವೆಂದು ಭಾವಿಸುವರೋ ಅಂದು ಅವರು ತಮ್ಮ ಸಂಸ್ಕೃತಿ, ಸ್ವಾಭಿಮಾನವನ್ನು ಮರೆತು ನಮ್ಮ ಗುಲಾಮರಾಗುವರು." ಪಾಶ್ಚ್ಯಾತ್ಯದ್ದೆಲ್ಲವೂ ಶ್ರ್‍ಏಷ್ಠವೆಂದು ಭಾವಿಸುವವರಿಗೆ ಈ ಸತ್ಯ ಕಣ್ತೆರೆಸಬೇಕು. ಮೆಕಾಲೆಯು ತನ್ನ ಈ ಪ್ರಯತ್ನದಲ್ಲಿ ಗುಮಾಸ್ತರ ದೇಶವೊಂದನ್ನು ಸೃಷ್ಟಿಸಿದ ಎಂಬ ಮಾತಿದೆ. ಈಗಿನ ಹೊರ ಗುತ್ತಿಗೆ ಉದ್ಯಮವೂ ಇದಕ್ಕೆ ಅಪವಾದವಾಗಲಾರದು. ಬ್ರಿಟಿಷರಿಂದ ಸ್ವತಂತ್ರರಾಗಿ ೬೦ ವರ್ಷಗಳಾದರೂ ಅವರ ಭಾಷೆಗೆ, ಪ್ರಾರಂಭಿಸಿದ ವ್ಯವಸ್ಥೆಗೆ ಜೋತು ಬಿದ್ದಿರುವುದು ಕಂಡುಬರುತ್ತದೆ. ಇನ್ನಾದರು ನಮ್ಮಲ್ಲಿ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಬೇಕು. ಹಾಗೆಯೇ ಕಾಲಕ್ಕನುಗುಣವಾಗಿ ನಮ್ಮ ವೃತ್ತಿ ಕೌಶಲವನ್ನು ಹೆಚ್ಚಿಸಕೊಳ್ಳಬೇಕು. ಆದರೆ ಇದೆಲ್ಲವೂ ನಮ್ಮ ಭಾಷೆ, ಸಂಸ್ಕೃತಿಯನ್ನು ತ್ಯಜಿಸಿಯಲ್ಲ.